भारतीय भाषाओं द्वारा ज्ञान

Knowledge through Indian Languages

Dictionary

Janapada Vastukosha (Kannada)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ತಟ್ಟುಳಿ

ಮರದ ತುಂಡುಗಳನ್ನು ನಿಗದಿತ ಸ್ಥಳದಲ್ಲಿ ಜೋಡಿಸಲು ಅಗತ್ಯವಾದ ರಂಧ್ರ ಮಾಡಿಕೊಳ್ಳಲು ಬಳಸುವ ಸಾಧನ. ಇದು ಸುಮಾರು ಹನ್ನೊಂದು ಇಂಚು ಉದ್ದವಿದ್ದು ಇದರಲ್ಲಿ ಹಿಡಿಕೆಯ ಉದ್ದ ನಾಲ್ಕೂವರೆ ಇಂಚು, ನಾಲ್ಕು ಇಂಚು ದಪ್ಪವಿರುತ್ತದೆ. ಉಳಿಯ ತಗಡಿನ ಅಗಲ ಎರಡು ಇಂಚು ಇರುತ್ತದೆ. ತುದಿ ಹರಿತವಾಗಿರುತ್ತದೆ.

ತತ್ರಾಣಿ

ಕುಡಿಯುವ ನೀರು ಹಾಕಿಡಲು ಬಳಸುವ ಮಣ್ಣಿನ ಸಾಧನ. ಇದನ್ನು ಹೊಲಗಳಲ್ಲಿ ಕೆಲಸ ಮಾಡುವಾಗ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಾರೆ. ತತ್ರಾಣಿಯು ಚಿಕ್ಕದಾಗಿದ್ದರೆ ಅದರ ಕುತ್ತಿಗೆಯ ಭಾಗಕ್ಕೆ ಹಗ್ಗ ಹಾಕಿ ಒಯ್ಯುಬಹುದು. ದೊಡ್ಡದಾಗಿದ್ದರೆ ಹಾಗೆ ಮಾಡಿದಾಗ ತತ್ರಾಣಿಯ ಮೇಲ್ಭಾಗವು ಕಿತ್ತುಕೊಳ್ಳುವ ಅಪಾಯವಿರುವುದರಿಂದ ಅದರ ಸುತ್ತಲೂ ಲಂಬವಾಗಿ ಹಗ್ಗವನ್ನು ಆಧಾರವಾಗಿ ಹಾಕಿಕೊಳ್ಳಲು ಪುಟ್ಟ ಓಣಿಯಂಥ ರಚನೆ ಇರುತ್ತದೆ.
ತತ್ರಾಣಿಯನ್ನು ಬಗಲ್ಲಿ ಹಾಕಿಕೊಂಡು ಒಯ್ಯವುದು ರೂಢಿ. ನೀರು ವ್ಯರ್ಥವಾಗದಂತೆ ಸರಿದುಕೊಳ್ಳಲು ತತ್ರಾಣಿಯ ಬಾಯಿಯ ಬಳಿ ಸಣ್ಣ ಕೊಳವೆಯಥ ರಚನೆ ಇದೆ. ಅದನ್ನು ಮುಚ್ಚಲು ಬೆಣೆ ಕೂಡ ಇರುತ್ತದೆ. ತತ್ರಾಣಿಯು ಆವೆ ಮಣ್ಣಿನಿಂದ ತಯಾರಾಗುವುದರಿಂದ ಅದರಲ್ಲಿ ಹಾಕಿಟ್ಟ ನೀರು ತಂಪಾಗಿರುತ್ತದೆ. ಪ್ಲಾಸ್ಟಿಕ್‌ಕ್ಯಾನ್, ವಾಟರ್‌ಬಾಟಲ್‌ಗಳು ತತ್ರಾಣಿಯ ಸ್ಥಾನವನ್ನು ಆಕ್ರಮಿಸಿರುವುದಾದರೂ ಅದರ ಗುಣಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.

ತತ್ರಾಣಿ

ಕುಡಿಯುವ ನೀರು ಹಾಕಿಡಲು ಬಳಸುವ ಮಣ್ಣಿನ ಸಾಧನ. ಇದನ್ನು ಹೊಲಗಳಲ್ಲಿ ಕೆಲಸ ಮಾಡುವಾಗ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಾರೆ. ಇಂತಹ ವಸ್ತುವನ್ನು ಮಕ್ಕಳು ಆಟಿಕೆಗಾಗಿ ಬಳಸುತ್ತಾರೆ. ಇದು ಅತ್ಯಂತ ಕಿರಿದಾಗಿರುತ್ತದೆ.

ತವೆ/ಹೆಂಚು

ರೊಟ್ಟಿ ಬೇಯಿಸಲು ಬಳಸುವ ಲೋಹದ ಸಾಧನ. ಇದರ ವ್ಯಾಸ ಸುಮಾರು ಒಂಭತ್ತು ಇಂಚು ತೆಳುವಾಗಿದೆ. ಇದು ಸುಮಾರಾಗಿ ತೆಪ್ಪದ ಆಕಾರದಲ್ಲಿರುತ್ತದೆ. ದನಿಯಾ, ಮೆಣಸಿನಕಾಯಿ, ಕಡಲೆಬೀಜ ಇತ್ಯಾದಿಗಳನ್ನು ಹುರಿಯಲು ಕೂಡ ಬಳಕೆಯಾಗುತ್ತದೆ. ತವೆಗಳ ಗಾತ್ರದಲ್ಲಿ ವ್ಯತ್ಯಾಸವಿದೆ. ಲೋಹದಿಂದ ಕೂಡ ತವೆಗಳನ್ನು ನಿರ್ಮಿಸುತ್ತಾರೆ.

ತಾಬಂಡಿ

ಊಟ ಮಾಡಲು ಜನಪದರು ಬಳಸುವ ತಟ್ಟೆ. ಇದು ಸಾಮಾನ್ಯ ತಾಟು/ಬಟ್ಟಲುಗಳಿಗಿಂತ ದೊಡ್ಡ ಗಾತ್ರದಲ್ಲಿದೆ. ತಳದಿಂದ ಮೇಲೇಳುವ ಅಂಚು ಅನುಕ್ರಮವಾಗಿ ತುಸು ಹೊರಕ್ಕೆ, ನೇರವಾಗಿ ಮತ್ತು ತುಸು ಒಳಕ್ಕೆ ಬಾಗಿರುತ್ತದೆ. ಏನಿದ್ದರೂ ಈ ಅಂಚು ಸುಮಾರು ಒಂದೂವರೆ ಇಂಚಷ್ಟೆ ಇದೆ. ತಾಬಂಡಿಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ, ಸಹಜವಾಗಿ ತೂಕದಲ್ಲೂ. ಸಾಮಾನ್ಯ ತಾಬಂಡಿ ಸುಮಾರು ಒಂದು ಕೆ.ಜಿ. ಭಾರವಿರುತ್ತದೆ. ತಾಬಂಡಿಯನ್ನು ದಪ್ಪ ಕಂಚಿನ ತಗಡಿನಿಂದ ನಿರ್ಮಿಸಲಾಗಿರುತ್ತದೆ. ಇದನ್ನು ಬಳಸಿ ಊಟ ಮಾಡುವುದು ಆರೋಗ್ಯದಾಯಕವೆಂಬುದು ಜನಪದರ ಅನುಭವ. ಅಡ್ಡಣಿಗೆಯ ಮೇಲೆ ತಾಬಂಡಿಯನ್ನು ಇರಿಸಿಕೊಂಡು ಊಟ ಮಾಡುವುದೇ ಜನಪದರಿಗೆ ಸಂತೃಪ್ತಿಯ ಒಂದು ವಿಚಾರ.

ತಾಳ

ತಾಳವನ್ನು ಸಾಮಾನ್ಯವಾಗಿ ಭಜನೆ ಸಂದರ್ಭಗಳಲ್ಲಿ ಸಂಗೀತ ಸಾಧನವಾಗಿ ಬಳಸಲಾಗುತ್ತದೆ. ಯಕ್ಷಗಾನ, ದೊಡ್ಡಾಟಗಳ ಭಾಗವತರು ಕೂಡ ಇಂಥ ತಾಳಗಳನ್ನು ಬಾರಿಸುತ್ತ ಭಾಗವತಿಕೆ ಮಾಡುತ್ತಾರೆ. ಹಿತ್ತಾಳೆ ಅಥವಾ ಕಂಚಿನಿಂದ ತಯಾರಿಸಲಾಗುವ ಈ ತಾಳಗಳು ವೃತ್ತಾಕಾರದಲ್ಲಿರುತ್ತವೆ. ಮಧ್ಯದಲ್ಲಿ ರಂಧ್ರವಿರುತ್ತವೆ. ಅವುಗಳಿಗೆ ಹಗ್ಗಗಳನ್ನು ಪೋಣಿಸಿಕೊಳ್ಳುತ್ತಾರೆ. ತಾಳವೆಂದರೆ ಜೋಡಿಯಾಗಿ ಗುರುತಿಸಲಾಗುತ್ತಿದೆಯೇ ಹೊರತು ಏಕವಸ್ತುವಾಗಿ ಅಲ್ಲ. ಇವುಗಳಿಗೆ ಹಿಡಿಕೆಯಾಗಿ ಹಗ್ಗವನ್ನು ಹಾಕಲಾಗಿರುತ್ತದೆ.

ತಿಗರಿ

ಕುಂಬಾರರು ಗಡಿಗೆ/ಪಾತ್ರೆ ತಯಾರಿ ಮಾಡುವ ಸಂದರ್ಭದಲ್ಲಿ ಬಳಸುವ ಸಾಧನ. ಇದು ಚಕ್ಕಡಿ ಗಾಲಿಯಂತಿದ್ದು ಗಾಲಿಯ ಗಡ್ಡೆಯ ಮಧ್ಯಭಾಗದಲ್ಲಿ ಒಂದು ಚಿಕ್ಕ ರಂಧ್ರವಿರುತ್ತದೆ. ಈ ರಂಧ್ರವನ್ನು ಗಾಲಿಯ ತಿರುಗುವಿಕೆಗೆ ಅನುಕೂಲವಾಗುವಂತೆ ಅಳವಡಿಸಲಾಗುತ್ತದೆ. ಗಡಿಗೆ ಮಾಡುವ ಸಂದರ್ಭದಲ್ಲಿ ಗಡಿಗೆ ತಯಾರಕ ಇದರ ಎದುರುಗಡೆ ಕುಳಿತುಕೊಂಡು ಮಧ್ಯಭಾಗದ ರಂಧ್ರದಲ್ಲಿ ಒಂದು ನಯವಾದ ಕೋಲಿನಿಂದ ತಿಗರಿಯನ್ನು ಗಡಿಗೆ ರಚನೆಗೆ ಅನುಕೂಲವಾಗುವಂತೆ ನಿಧಾನವಾಗಿ ಅಥವಾ ವೇಗವಾಗಿ ತಿರುಗಿಸಿಕೊಳ್ಳುತ್ತಾನೆ.
ತಿಗರಿ ತಿರುಗುವಾಗ ಹದಗೊಳಿಸಿದ ಅರ್ಲುಮುದ್ದೆ/ಮಣ್ಣಿನ ಮುದ್ದೆಯನ್ನು ತಿಗರಿಯ ಮಧ್ಯಭಾಗದ ಗಡ್ಡೆಯ ಮೇಲಿಟ್ಟು ತನ್ನ ಕೈಚಳಕದಿಂದ ತನಗೆ ಬೇಕಾದ ಆಕಾರದಲ್ಲಿ ಮಡಕೆಗೆ ರೂಪಕೊಡುತ್ತಾನೆ. ನಡುನಡುವೆ ತಿಗರಿಯ ವೇಗ ಕಡಿಮೆಯಾದಾಗ ಮಡಕೆ ತಯಾರಕನು ತಿಗರಿಯು ತಿರುಗಿಸುತ್ತ ಇರುವಾಗಲೇ ಗಡಿಗೆ ಪಾತ್ರೆಯನ್ನು ನಿರೀಕ್ಷಿತ ಆಕೃತಿಗೆ ತರುತ್ತಾನೆ. ಬಳಿಕ ಗಡಿಗೆ, ತಿಗರಿಗೆ ಅಂಟಿಕೊಂಡ ಪಾತ್ರೆಯನ್ನು ದಾರದಿಂದ ಕತ್ತರಿಸಿ ಬೇರ್ಪಡಿಸಿ ಪಕ್ಕದಲ್ಲಿ ಸಜ್ಜುಗೊಳಿಸಲಾದ ಹಾಸಿದ ಬೂದಿಯ ಮೇಲೆ ಇರಿಸುತ್ತಾನೆ.
ತಿಗರಿಯನ್ನು ಕಟ್ಟಿಗೆ/ಮರ ಮತ್ತು ಮಣ್ಣಿನಿಂದ ತಯಾರಿಸುತ್ತಾರೆ. ತಿಗರಿಯ ನಡುವಿನ ದಪ್ಪಗಾತ್ರದ ಗಡ್ಡೆಯು ಮರದ್ದಾಗಿದ್ದು ಅದಕ್ಕೆ ಸ್ವಲ್ಪ ಸ್ವಲ್ಪ ಅಂತರದಲ್ಲಿ ಜೋಡಿಸಲಾಗುವ ಹಲ್ಲು/ಎಲೆಗಳೂ ಮರದ್ದೇ ಆಗಿವೆ. ಒಳಗೆ ಬಳ್ಳಿಗಳನ್ನು ಸುತ್ತಿ ಮಣ್ಣು ಲೇಪನ ಮಾಡಿ ಹೊರಗಿನ ಸುತ್ತಿನ ಚಕ್ರವನ್ನು ಕೆಲವರು ತಯಾರಿಸಿಕೊಂಡಿರುತ್ತಾರೆ. ಇವತ್ತಿನ ಕುಂಬಾರಿಕೆ ಸಣ್ಣ ಸಣ್ಣ ಪಾತ್ರೆಗಳ ತಯಾರಿಕೆಗೆ ಸೀಮಿತವಾಗಿರುವುದರಿಂದ ಹಾಗೂ ಮಹಿಳೆಯರು ಪಾತ್ರೆ ತಯಾರಿಸಿಕೊಳ್ಳುವುದಕ್ಕೆ ಸೀಮಿತವಾಗಿರುವುದರಿಂದ ಈಗ ಇದರ ಬಳಕೆ ಕಡಿಮೆಯಾಗಿದೆ. ತಿಗರಿಯು ಕುಲಾಲಚಕ್ರವೆಂಬ ಹೆಸರಿನಿಂದ ಕಾಲಗತಿಯ ಸಂಕೇತವಾಗಿ ಪರಿಗಣಿತವಾಗಿದೆ.

ತಿದಿ

ಕಮ್ಮಾರರು ಕಬ್ಬಿಣದ ಉಪಕರಣಗಳನ್ನು ತಯಾರಿಸುವಾಗ ಅವುಗಳ ಭಾಗಗಳನ್ನು ಬೆಂಕಿಯಲ್ಲಿ ಕಾಯಿಸಲು, ಕೆಂಡಗಳು ಚೆನ್ನಾಗಿ ಉರಿಯುವಂತೆ ಗಾಳಿ ಹಾಕಿಕೊಳ್ಳಲು ಬಳಸುವ ಉಪಕರಣ. ತಿದಿಯು ನಾಲ್ಕು ಅಡಿ ಉದ್ದ ಎರಡು ಅಡಿ ಅಗಲವಿದೆ. ಮೇಲ್ಭಾಗ ಮತ್ತು ಕೆಳಭಾಗಕ್ಕೆ ಮರದ ತೆಳು ಹಲಗೆಗಳನ್ನು ಜೋಡಿಸಿ ಹಿಂದಿನ ಭಾಗಕ್ಕೆ ಎಮ್ಮೆಯ ಚರ್ಮದಿಂದ ಬಿಗಿಯಲಾಗುತ್ತದೆ. ಕೆಳಭಾಗಕ್ಕೆ ಕಬ್ಬಿಣದ ಸರಳನ್ನು ಜೋಡಿಸಿರುತ್ತಾರೆ. ತಿದಿಯ ಮುಂದಿನ ಭಾಗಕ್ಕೆ ಕೊಳೆವೆಯಾಕಾರದ ಕಬ್ಬಿಣದ ಪೈಪನ್ನು ಹಾಕಿರುತ್ತಾರೆ. ತಿದಿಯ ಹಿಂಭಾಗಕ್ಕೆ ಒಂದು ಹಗ್ಗವನ್ನು ಕಟ್ಟಿ ಅದನ್ನು ಒಂದು ಉದ್ದವಾದ ಮರದ ಕೋಲಿಗೆ ಕಟ್ಟುತ್ತಾರೆ. ಕುಲುಮೆಯ ಮೇಲ್ಭಾಗಕ್ಕೆ ಬರುವಂತೆ ಕೋಲಿಗೆ ಸರಪಳಿಯನ್ನೂ ಕಟ್ಟುತ್ತಾರೆ. ಈ ಸರಪಳಿಯನ್ನು ಹಿಡಿದು ಮೇಲೆ ಕೆಳಗೆ ಎಳೆದಾಗ ಗಾಳಿಯು ಬರುತ್ತದೆ. ಆಗ ಕುಲುಮೆಯಲ್ಲಿ ಬೆಂಕಿ ಹೆಚ್ಚುತ್ತದೆ. ಸರಪಳಿಯಿಂದ ತಿದಿಯನ್ನು ಮೇಲಕ್ಕೆ ಎಳೆದಾಗ ಗಾಳಿಯು ಬರುತ್ತದೆ. ಕೆಳಕ್ಕೆ ಇಟ್ಟಾಗ ಗಾಳಿ ಬರುವುದು ನಿಲ್ಲುತ್ತದೆ. ತಿದಿಯು ವೀಣೆಯ ಆಕಾರದಲ್ಲಿದೆ. ಇತ್ತೀಚಿಗೆ ಟೈರ್ ಟೂಬ್‌ಗಳಿಂದ ತಿದಿಯನ್ನು ಬಿಗಿಯುತ್ತಾg

ತೀಡೋಗಣೆ/ಬೇಳೆಗುಂಡು

ಬೇಳೆ ಕಾಳುಗಳನ್ನು ಬೇಯಿಸಿದ ಬಳಿಕ ಅದನ್ನು ತೀಡುಗಣೆ ಬಳಸಿಕೊಂಡು ಒಂದಿಷ್ಟು ಮಸೆದು, ಜಜ್ಜಿ ಕೊಳ್ಳುತ್ತಾರೆ. ತುರ್ತಾಗಿ ಒಂದಿಷ್ಟು ಚಟ್ನಿ ಅರೆದುಕೊಳ್ಳುವುದಕ್ಕೂ ತೀಡುಗಣೆಯು ಬಳಕೆಯಾಗುತ್ತದೆ. ಇದರ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಇದರ ಹಿಡಿಕೆಯು ಸುಮಾರು ಒಂದು ಅಡಿ ಉದ್ದವಿದ್ದು ಬುಡದಲ್ಲಿ ಸಣ್ಣ ಗಡ್ಡೆಯಂತಹ ರಚನೆ ಇರುತ್ತದೆ. ಗಡ್ಡೆಯು ಸುಮಾರು ಎರಡು ಇಂಚಿನಿಂದ ನಾಲ್ಕು ಇಂಚುಗಳ ವ್ಯಾಸವಿರುತ್ತದೆ. ಇದನ್ನು ಇಂಗಳಾರದ ಮರದಿಂದ ತಯಾರಿಸುತ್ತಾರೆ. ಇಂಗಳಾರ ಔಷಧಿ ಗುಣವುಳ್ಳ ಮರ.

ತುಪ್ಪದ ಕುಡಿಕೆ-ಚಟಿಗೆ

ತುಪ್ಪ ಹಾಕಿಡಲು ಬಳಸುವ ಮಣ್ಣಿನ ಸಾಧನ. ಇದು ಸುಮಾರು ಆರು ಇಂಚು ಎತ್ತರವಿದ್ದು ಮೇಲ್ಭಾಗದ ವ್ಯಾಸವು ಸುಮಾರು ನಾಲ್ಕು ಇಂಚು ಹೊಂದಿರುತ್ತದೆ. ಇದು ದೀರ್ಘಕಾಲದ ವರೆಗೂ ತುಪ್ಪ ಕೆಡದಂತೆ ಕಾಪಾಡುವ ಗುಣ ಹೊಂದಿದೆ ಎನ್ನುವುದು ಜನಪದರ ಅನುಭವ.

ತೂಕದ ಗುಂಡು

ಕಟ್ಟಡ ಕಟ್ಟುವಾಗ ಗೊಡೆಗಳಿಗೆ ಇಟ್ಟ ಕಲ್ಲು/ಇಟ್ಟಿಗೆಗಳ ಗುರುತ್ವಾಕರ್ಷಣ ನೆಲೆಯನ್ನು ಪರೀಕ್ಷಿಸಲು ಬಳಸುವ ಉಪಕರಣ. ಕಬ್ಬಿಣದ ಗುಂಡನ್ನು ಮೇಲಿಂದ ಕೆಳಗೆ ಇಳಿ ಬಿಡಲು ದಾರವನ್ನು ಕಟ್ಟಿರುತ್ತಾರೆ. ಗುಂಡು ಸುಮಾರು ಮೂರು ಇಂಚು ಉದ್ದವಿರುತ್ತದೆ. ಇದಕ್ಕೆ ಸುಮಾರು ಎರಡು ಮೀಟರ್ ಉದ್ದದ ದಾರವನ್ನು ಪೋಣಿಸಿದೆ. ದಾರದಲ್ಲಿ ಚೌಕಕಾರದ ಪುಟ್ಟ ಹಲಗೆ ಕೂಡ ಜೋಡಣೆಯಾಗಿದೆ. ಕಟ್ಟಡದ ಮೂಲೆಯನ್ನು ಅಳತೆ ಮಾಡುವಾಗ ಹಲಗೆ ತುಂಡನ್ನು ಕೈಯಲ್ಲಿ ಗೋಡೆಗೆ ಹಿಡಿದು ದಾರದಲ್ಲಿ ನೇತಾಡುವ ಗುಂಡನ್ನು ಇಳಿಬಿಟ್ಟು ಕಟ್ಟುತ್ತಿರುವ ಗೋಡೆಯು ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡುವುದಕ್ಕೆ ಬಳಸುತ್ತಾರೆ. ಗುಂಡು ಸುಮಾರು ಎರಡನೂರ ಐವತ್ತು ಗ್ರಾಂ ತೂಕದ್ದಾಗಿದೆ. ಇದು ಗೋಲಾಕಾರವಿದಲ್ಲಿರುತ್ತದೆ.

ತೂಗುದೀಪ

ದೇವರ ಕೋಣೆ, ದೇವಾಲಯ, ದೈವಾಲಯಗಳಲ್ಲಿ ಸರ್ವ ಸಾಮಾನ್ಯವಾಗಿ ಇರುವ ದೀಪವಿಡುವ ಸಾಧನ. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ – ಸಂಕಲೆ ಮತ್ತು ದೀಪ ಎಂದು. ಸಂಕಲೆಯನ್ನು ಕೊಂಡಿಗೆ ಜೋತು ಹಾಕಲಾಗುತ್ತದೆ. ಸಂಕಲೆಯ ಬುಡವು ದೀಪದೊಂದಿಗೆ ಬಂಧಿತವಾಗಿರುತ್ತದೆ. ದೀಪವೂ ವೃತ್ತಾಕಾರದಲ್ಲಿದ್ದು ಸುಮಾರು ಆರು ಇಂಚು ವ್ಯಾಸವಿದೆ (ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ). ದೀಪದಲ್ಲಿ ಐದು ಸಮಾನ ಅಂತರಗಳಲ್ಲಿ ಬತ್ತಿಗಳನ್ನು ಇಟ್ಟುಕೊಳ್ಳಲು ರಚನೆಗಳಿವೆ. ಇಂಥ ದೀಪಗಳನ್ನು ಹಚ್ಚುವಾಗ ಪೂರ್ವಾಭಿಮುಖವಾಗಿರುವ ಬತ್ತಿಗಳನ್ನು ಮೊದಲು ಉರಿಸಿ ಬಳಿಕ ಪ್ರದಕ್ಷಿಣಾ ರೂಪದಲ್ಲಿ ಹಚ್ಚುವುದು ಸಂಪ್ರದಾಯ. ತೂಗು ದೀಪಗಳನ್ನು ಕಂಚು, ಹಿತ್ತಾಳೆ, ಬೆಳ್ಳಿ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ.

ತೆಪ್ಪ/ಹರಿಗೋಲು

ನದಿ ಹಾಗೂ ಕೆರೆಗಳಲ್ಲಿ ಮೀನುಗಾರಿಕೆ ಮತ್ತು ನದಿ ದಾಟಲು ಬಳಸುವ ಸಾಧನ. ಸಣ್ಣ ತೆಪ್ಪವು ತಟ್ಟೆಯ ಆಕಾರದಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರವಿರುತ್ತದೆ. ಮೇಲ್ಭಾಗದ ವ್ಯಾಸ ಆರು ಅಡಿ ಇದ್ದು ತಳಭಾಗ ಚಪ್ಪಟೆಯಾಗಿದೆ. ಬಿದಿರು ಅಥವಾ ತಟಿಕೆಯ ಸೀಳುಗಳಿಂದ ಹೆಣೆದು ಅದರ ಹೊರ ಮೈಮೇಲೆ ಪ್ಲಾಸ್ಟಿಕ್ ಚೀಲವನ್ನು ಹೊದಿಸಿ ಚೀಲದ ಮೇಲ್ಭಾಗದಲ್ಲಿ ಡಾಂಬರ್ ಹಾಕಿದ್ದಾರೆ ನೀರು ಒಳಹೋಗದಂತೆ ತಡಯುವುದು ಇದರ ಮುಖ್ಯ ಉದ್ದೇಶ. ಜೋರಾಗಿ ಗಾಳಿ ಬೀಸದ ಎಲ್ಲಾ ನೀರಿನ ತಾಣಗಲ್ಲಿ ಇದು ಸಾಮಾನ್ಯವಾಗಿ ಬಳಕೆಯಾಗುತ್ತದೆ.

ತೊಟ್ಟಿಲು

ಮಕ್ಕಳನ್ನು ತೂಗಿ ಮಲಗಿಸಲು ಬಳಸುವ ಸಾಧನ. ಇದು ಸುಮಾರು ಒಂದೂವರೆ ಅಡಿ ಎತ್ತರ, ಮೂರು ಅಡಿ ಉದ್ದ, ಒಂದೂವರೆ ಅಡಿ ಅಳತೆಯುಳ್ಳದ್ದಾಗಿರುತ್ತದೆ. ಇದರ ಒಳಭಾಗದಲ್ಲಿ ಹಲಗೆಗಳನ್ನು ಜೋಡಿಸಲು ಎರಡು ಪಟ್ಟಿಗಳಿರುತ್ತವೆ. ಹಲಗೆಗಳನ್ನು ಜೋಡಿಸಲು ಕ್ರಮವಾಗಿ ನಾಲ್ಕು ಕಂಬಗಳಿದ್ದು, ಕೆಲವು ತೊಟ್ಟಿಲುಗಳಲ್ಲಿ ಇದರ ಮೇಲೆ ಬುಗುರಿಯಾಕಾರದ ಮಣಿಗಳಿರುತ್ತವೆ. ಮಕ್ಕಳ ನಾಮಕರಣದ ಬಳಿಕ ಸಾಮಾನ್ಯವಾಗಿ ತೊಟ್ಟಲಿನ ಬಳಕೆಯಾಗುತ್ತದೆ. ಆರ್ಥಿಕತೆಗನುಗುಣವಾಗಿ ತೊಟ್ಟಿಲನ್ನು ಬಳಕೆಮಾಡುತ್ತಾರೆ. ತೊಟ್ಟಿಲನ್ನು ಸಾಮಾನ್ಯವಾಗಿ ತೇಗ, ಹಲಸು ಮುಂತಾದ ಮರದಿಂದ ತಯಾರಿಸುತ್ತಾರೆ. ತೊಟ್ಟಿಲುಗಳನ್ನು ಕಲಾತ್ಮಕವಾಗಿ ರಚಿಸುತ್ತಾರೆ. ಲೋಹಗಳಿಂದಲೂ ತೊಟ್ಟಿಲುಗಳನ್ನು ನಿರ್ಮಿಸುತ್ತಾರೆ.

ತೊರಳಿ ಕಲ್ಲು/ತೊಳಲಿಕಲ್ಲು

ಭತ್ತವನ್ನು ಅಕ್ಕಿ ಮಾಡಿಕೊಳ್ಳಲು ಬಳಸುವ ಒಂದು ವಿಧದ ಬೀಸುವಕಲ್ಲು. ಇದರಲ್ಲೂ ಬೀಸುಕಲ್ಲಿನ ಹಾಗೆಯೇ ಎರಡು ಮುಖ್ಯ ಭಾಗಗಳಿವೆ-ಅಡಿಗಲ್ಲು ಮತ್ತು ತಿರುಗಲ್ಲು. ಅಡಿಗಲ್ಲಿನ ಮೇಲ್ಭಾಗ ಮತ್ತು ತಿರುಗಲ್ಲಿನ ಕೆಳಭಾಗದಲ್ಲಿ ಭತ್ತವು ಸಾಧಾರಣವಾಗಿ ಅಡಗಬಲ್ಲಷ್ಟು ಗಾತ್ರದ ಅನೇಕ ಗೆರೆಗಳನ್ನು ಕೊರೆಯಲಾಗಿರುತ್ತದೆ. ಆದರೆ ಅವು ಭತ್ತವನ್ನು ಹಿಡಿದಿಡದೆ ಜಾರುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿರುತ್ತವೆ. ಈ ತಂತ್ರಜ್ಞಾನದಿಂದ ಈ ಬೀಸುಗಲ್ಲನ್ನು ತಿರುಗಿಸಿದಾಗ ಭತ್ತದ ಹೊಟ್ಟಷ್ಟೆ ಕಳಚಿಕೊಂಡು ಅಕ್ಕಿಯು ಸಿದ್ಧವಾಗುತ್ತದೆ ಮಾತ್ರವಲ, ಅಕ್ಕಿಯು ತುಂಡಾಗುವುದು ಕಡಿಮೆ. ತಿರುಗಲ್ಲಿನ ಇನ್ನೊಂದು ವೈಶಿಷ್ಟವೆಂದರೆ ಅದರ ರಂಧ್ರವು ತುಂಬ ದೊಡ್ಡದಾಗಿದ್ದು ಹೆಚ್ಚು ಪ್ರಮಾಣದ ಭತ್ತವನ್ನು ಸುರಿಯಲು ಅನುಕೂಲವಾಗುವಂತಿರುತ್ತದೆ. ತೊರಳಿ ಕಲ್ಲುಗಳು ಉಳಿದ ಬೀಸುಕಲ್ಲುಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ ಹಾಗೂ ಇವುಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಇದನ್ನು ಸಾಮಾನ್ಯವಾಗಿ ಇಬ್ಬರು ಸೇರಿಕೊಂಡು ಬೀಸುತ್ತಾರೆ. ಇದನ್ನು ಮರದಿಂದಲೂ, ಕಲ್ಲಿನಿಂದಲೂ ತಯಾರಿಸುತ್ತಾರೆ. ಕರ್ನಾಟಕದ ಗದಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ರೈಸ್ ಮಿಲ್ಲುಗಳು ಮತ್ತು ಗಿರಣಿಗಳು ಬಂದ ಬಳಿಕ ತೊರಳಿ ಕಲ್ಲುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.

Search Dictionaries

Loading Results

Follow Us :   
  ভাৰতবাণী এপ ডাউনলোড কৰক
  Bharatavani Windows App